ಹೈದ್ರಾಬಾದ್ ಕರ್ನಾಟಕ ಡೆಸ್ಕ್
ನಗರಸಭೆ ಸೂಪರ್ಸೀಡ್ ಮಾಡಲು ಟಿ.ಮಾರೆಪ್ಪ ಆಗ್ರಹ

ರಾಯಚೂರು,ಜೂ.೬-ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿರುವ ರಾಯಚೂರು ನಗರಸಭೆಯನ್ನು ಸೂಪರ್ಸೀಡ್ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಟಿ. ಮಾರೆಪ್ಪ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜನರಿಗೆ ಕುಡಿಯಲು ಶುದ್ಧನೀರು, ಜನರ ಆರೋಗ್ಯ ರಕ್ಷಣೆ, ನಗರ ಸ್ವಚ್ಛತೆಗೆ ಕಿಂಚಿತ್ತೂ ಶ್ರಮಿಸದ ನಗರಸಭೆ ಆಡಳಿತ ಮಂಡಳಿ ನಾಗರಿಕರ ಜೀವ ಹಾಗೂ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳದೆ ನುಣುಚಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ. ಸ್ವತಃ ನಗರಸಭೆ ಆಡಳಿತ ನಡೆಸುತ್ತಿರುವ ಬಿಜೆಪಿಯ ಹಿರಿಯ ಸದಸ್ಯರೇ ಇಂತಹ ದುರದೃಷ್ಟಕರ ಸನ್ನಿವೇಶ ನಡೆಯುತ್ತಿರುವುದು ಇತಹಾಸದಲ್ಲಿ ಇದೇ ಮೊದಲು ಎಂದು ಹೇಳಿರುವುದು ನಗರಸಭೆ ಆಡಳಿತ ವೈಖರಿಯ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುವ್ಯವಸ್ಥಿತ ಆಡಳಿತ ನಡೆಸಲು ವಿಫಲವಾಗಿರುವ ನಗರಸಭೆಯ ವಿರುದ್ಧ ಈಗಾಗಲೇ ಜನರ ಆಕ್ರೋಶದ ಕಟ್ಟೆಯೊಡೆದಿದೆ. ಹಾಗಾಗಿ ಜನರ ಆಡಳಿತ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವ ಮುನ್ನವೇ ನಗರಸಭೆಯನ್ನು ಸೂಪರ್ಸೀಡ್ ಮಾಡುವ ಮೂಲಕ ಜನರ ಆರೋಗ್ಯ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಸರಕಾರ ಯುದ್ದೋಪಾದಿಯಲ್ಲಿ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.