ಹೈದ್ರಾಬಾದ್ ಕರ್ನಾಟಕ ಡೆಸ್ಕ್
ನಿಗಮ ಮಂಡಳಿ-ಪ್ರಾಧಿಕಾರದ ಅಧ್ಯಕ್ಷರ ಅವಧಿ ರದ್ದು- ಆದೇಶ
ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಅವರ ಆದೇಶದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಆಯಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ, ಸೂಚನೆ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ವಿವಿಧ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕಾತಿಯನ್ನು ರದ್ದು ಮಾಡಲಾಗಿದೆ. ಒಂದೂವರೆ ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಮಾನದಂಡದ ಅಡಿಯಲ್ಲಿ ರದ್ದುಮಾಡಲಾಗಿದೆ. ಈ ಸಂಬಂಧ ನೇಮಕಾತಿ ರದ್ದು ಸಂಬಂಧ ಬಿಜೆಪಿ ತ್ರಿಸದಸ್ಯ ಸಮಿತಿ ರಚಿಸಿತ್ತು.
ಸಚಿವ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ನೇತೃತ್ವದ ತ್ರಿ ಸದಸ್ಯ ಸಮಿತಿ ರದ್ದುಪಟ್ಟಿ ತಯಾರಿಸಿ ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಿದ್ದರು. (ಜುಲೈ 11) ಮುಖ್ಯಮಂತ್ರಿಗಳು ಸಮಿತಿ ಸದಸ್ಯರ ಜೊತೆ ಚರ್ಚಿಸಿ ಅಂತಿಮ ಪಟ್ಟಿ ಸಿದ್ದಪಡಿಸಿದ್ದರು.
ಹೊಸಬರ ನೇಮಕಕ್ಕೆ ಈಗಾಗಲೇ ಪಟ್ಟಿ ಸಿದ್ಧವಾಗಿದ್ದು, ಯಾವುದೇ ಕ್ಷಣದಲ್ಲಿ ಅದು ಹೊರಬೀಳಬಹುದು.