top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

1996-97, 97-98ರ ರೈಲ್ವೆ ಯೋಜನೆಗಳು ಕುಂಠಿತ!

ಹೆಸರು ಬದಲಾಯಿಸಿದರೂ ಹಿತಾಸಕ್ತಿ ಪ್ರದರ್ಶಿಸದ ಸರ್ಕಾರಗಳು

ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯ ಹಲವು ಜಿಲ್ಲೆಗಳು ಹೈದ್ರಾಬಾದ್ ನಿಜಾಮನ ಆಳ್ವಿಕೆಗೊಳಪಟ್ಟಿದ್ದವು. ದೇಶದ ಪ್ರಜಾಸತಾತ್ಮಕ ಆಡಳಿತದಲ್ಲಿ ಸೇರ್ಪಡೆಗೊಳ್ಳದೇ ನಿಜಾಮನ ಆಡಳಿತದಲ್ಲಿದ್ದ ಹೈದ್ರಾಬಾದ್-ಕರ್ನಾಟಕದ ಸ್ಥಿತಿ ಚಿಂತಾಜನಕವಾಗಿತ್ತು. ಸರ್ದಾರ ವಲ್ಲಭಾಯಿ ಪಟೇಲರ ಚಾಣಾಕ್ಷತನದಿಂದಾಗಿ ಹೈದ್ರಾಬಾದ್-ಕರ್ನಾಟಕ ನಿಜಾಮನ ಕಪಿಮುಷ್ಠಿಯಿಂದ ಬಿಡಿಸಿಕೊಂಡು ದೇಶದ ಆಡಳಿತಕ್ಕೆ ಒಳಪಟ್ಟಿತು.

೧೯೫೬ರವರೆಗೆ ಹೈದ್ರಾಬಾದ್ ರಾಜ್ಯದ ಭಾಗವಾಗಿದ್ದ ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳ ಅಭಿವೃದ್ಧಿ ಸಂಪೂರ್ಣವಾಗಿ ಕಡೆಕಣಿಸಲ್ಪಟ್ಟಿತ್ತು. ೧೯೫೬ರ ನಂತರ ನಿಜಾಮನ ಆಡಳಿತದಿಂದ ವಿಮೋಚನೆಗೊಳಪಟ್ಟು ಕರ್ನಾಟಕ ರಾಜ್ಯದ ಭಾಗವಾಯಿತು. ನಂತರದ ದಿನಮಾನಗಳಲ್ಲಿ ಹೈದ್ರಾಬಾದ್-ಕರ್ನಾಟಕ ಕಲ್ಯಾಣವಾಗಲಿದೆ ಎಂಬ ಈ ಭಾಗದ ಜನರ ಆಸೆ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು ಗರಿಗೆದರಿದವು. ರಾಜ್ಯದ ಆಡಳಿತ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾದುದ್ದರಿಂದ ಉತ್ತರ ಕರ್ನಾಟಕದ ಅತೀ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್-ಕರ್ನಾಟಕವನ್ನು ಮತ್ತಷ್ಟು ಕಡೆಗಣಿಸಲ್ಪಟ್ಟಿತು. ನಂತರದಲ್ಲಿ ಈ ಭಾಗದ ಹೋರಾಟಗಾರರು, ಶಿಕ್ಷಣ ತಜ್ಞರು, ರಾಜಕೀಯ ಚಿಂತಕರ ದೂರದೃಷ್ಠಿಯಿಂದಾಗಿ ಈ ಪ್ರಾಂತ ತಕ್ಕಮಟ್ಟಿಗೆ ಸೌಲಭ್ಯಗಳನ್ನು ಪಡೆಯಿತಾದರೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೆಂದೇ ಖ್ಯಾತಿ ಗಳಿಸುವಂತಾಯಿತು.

ವಿಮೋಚನೆ ಪಡೆದು ೭೪ ವರ್ಷಗಳು ಗತಿಸಿದರೂ ಈ ಭಾಗದ ಅಭಿವೃದ್ಧಿಗೆ ರಾಜಕೀಯ ಪಕ್ಷಗಳು ಮತ್ತು ಇಲ್ಲಿನ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಲಿಲ್ಲ ಎಂಬುವುದು ಕೂಡ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನದ ಪ್ರಗತಿ ನೋಡಿದರೆ ತಿಳಿಯುತ್ತದೆ.

ನಿಜವಾದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಪರಿಣಾಮ ರಾಜಕೀಯ ಹಿತಾಸಕ್ತಿ ಪ್ರದರ್ಶನವಾಗಿಲ್ಲ. ಈ ಭಾಗದ ಜನರ ನಡುವಿನ ಸಾರಿಗೆ ಕೊಂಡಿಯಾಗಬೇಕಾಗಿದ್ದ ರೈಲ್ವೆ ಯೋಜನೆಗಳು, ಸಾರಿಗೆ ಯೋಜನೆಗಳು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ. ೧೯೯೬-೯೭ರಿಂದ ಜಾರಿಯಾಗಿರುವ ರೈಲ್ವೆ ಯೋಜನೆಗಳು ಇನ್ನೂ ಕೂಡ ಮುಗಿದಿಲ್ಲ ಎಂಬುವುದು ಈ ಭಾಗವನ್ನು ನಿರ್ಲಕ್ಷö್ಯ ಮಾಡಿರುವುದಕ್ಕೆ ನಿದರ್ಶನವಾಗಿದೆ.

ಗದಗ-ವಾಡಿ ರೈಲ್ವೆ ಮಾರ್ಗ, ಮುನಿರಾಬಾದ್-ಮಹಿಬೂಬ್ ನಗರ ರೈಲ್ವೆ ಮಾರ್ಗ ಪ್ರಾರಂಭವಾಗಿ ದಶಕಗಳೇ ಕಳೆದರೂ ಪೂರ್ಣಗೊಂಡಿಲ್ಲ. ೧೯೯೬ರಲ್ಲಿ ಕೊಪ್ಪಳ ತಾಲೂಕಿನ ಗಿಣಿಗೇರಿಯಿಂದ ಪ್ರಾರಂಭವಾದ ಮುನಿರಾಬಾದ್ ರೈಲ್ವೆ ಮಾರ್ಗ ಇನ್ನೂ ಅಂತ್ಯಕ್ಕೆ ಬಂದು ತಲುಪಿಲ್ಲ. ಸುಮಾರು ೧೬೫ ಕಿ.ಮೀ ಮಾರ್ಗವಾಗಿರುವ ಈ ರೈಲ್ವೆ ಯೋಜನೆ ಗಂಗಾವತಿ, ಕಾರಟಗಿ, ಸಿಂಧನೂರು, ಮಾನ್ವಿ ಮೂಲಕ ರಾಯಚೂರಿಗೆ ಬಂದು ತಲುಪುತ್ತದೆ. ಪ್ರತಿ ವರ್ಷ ನಿಗದಿಪಡಿಸಿದ ಅಂದಾಜುಪಟ್ಟಿಯಲ್ಲಿ ಸೇರಿಕೆ ಕಂಡುಬರುತ್ತಿರುವ ಈ ಯೋಜನೆಯ ಭಾಗವಾಗಿರುವ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಬಾಕಿಯಿದೆ.

ಸಿಂಧನೂರು ತಾಲೂಕಿನ ೨೦೫ ಎಕರೆ, ಮಾನ್ವಿ ತಾಲೂಕಿನ ೬೮೪ ಎಕರೆ, ರಾಯಚೂರು ತಾಲೂಕಿನ ಸುಮಾರು ೧೬ ಎಕರೆ ಪ್ರದೇಶ ಸ್ವಾಧೀನಪಡಿಸಿಕೊಂಡಿಲ್ಲ. ಗಿಣಿಗೇರಿಯಿಂದ ಸಿಂಧನೂರಿನವರೆಗೆ ರೈಲ್ವೆ ಮಾರ್ಗ ಮುಗಿದಿದ್ದು, ಸಿಂಧನೂರಿನಿಂದ ರಾಯಚೂರುವರೆಗೆ ಇನ್ನೂ ಪ್ರಗತಿ ಕಂಡಿಲ್ಲ. ಇದಕ್ಕೆ ಇಲ್ಲಿನ ಸಂಸದರ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ತುಸು ಮುತುವರ್ಜಿಯಿಂದಾಗಿ ಕಳೆದ ಬಾರಿ ಸಿಂಧನೂರುವರೆಗೆ ರೈಲ್ವೆ ಮಾರ್ಗವನ್ನು ಪೂರ್ಣಗೊಳಿಸಲಾಯಿತು ಎಂಬ ವಿಷಯ ಶ್ಲಾಘನೀಯವಾದರೂ ಅದೇ ಪಕ್ಷದ ನಾಯಕರ ನಿರ್ಲಕ್ಷö್ಯದಿಂದಾಗಿ ಈ ಯೋಜನೆ ಇನ್ನೂ ಕುಂಟುತ್ತಲೇ ಸಾಗುತ್ತಿದೆ.

ಅದೇ ರೀತಿ ಗದಗ-ವಾಡಿ ರೈಲ್ವೆ ಮಾರ್ಗವೂ ಕುಂಟುತ್ತಲೇ ಸಾಗುತ್ತಿದ್ದು, ಈ ಮಾರ್ಗ ಅನೇಕ ರೈಲು ನಿಲ್ದಾಣಗಳನ್ನು ಹೊಂದಿದೆ. ಸುಮಾರು ೨೫೭.೨೬ ಕಿ.ಮೀ ಉದ್ದದ ಈ ರೈಲ್ವೆ ಮಾರ್ಗಕ್ಕೆ ರಾಯಚೂರು, ಯಾದಗಿರಿ ಮತ್ತು ಕಲ್ಬುರ್ಗಿಯಲ್ಲಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆಗಳು ಪ್ರಾರಂಭಗೊಂಡಿಲ್ಲ.

೧೯೯೭-೯೮ರಲ್ಲಿ ಆಗಿನ ಪ್ರಧಾನಿ ಐ.ಕೆ.ಗುಜ್ರಾಲ್ ದೇಶದ ನೇತೃತ್ವವಹಿಸಿಕೊಂಡಿದ್ದರು. ಆಗ ಪ್ರಾರಂಭವಾಗಿದ್ದ ಈ ಯೋಜನೆ ಕಲ್ಬುರ್ಗಿ ಜಿಲ್ಲೆಯ ವಾಡಿಯಿಂದ ಪ್ರಾರಂಭವಾಗುತ್ತದೆ. ಅಂದಾಜು ೧೯೨೨ ಕೋ.ರೂ ಪರಿಷ್ಕೃತ ಅಂದಾಜಿನಂತೆ ಪ್ರಸ್ತುತ ಈ ಯೋಜನೆ ಪ್ರಗತಿ ಕಾಣುತ್ತಿದೆ ಎಂಬ ಮಾಹಿತಿಯೂ ಇದೆ.

ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ಎಕರೆಗೆ ೧೭ಲಕ್ಷ ರೂ. ನೀಡಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವಾಗ ರಾಯಚೂರು ಜಿಲ್ಲೆಯ ಲಿಂಗಸ್ಗೂರು, ಗುರುಗುಂಟಾದ ರೈತರಿಗೆ ಕಡಿಮೆ ದರ ನಿಗದಿಪಡಿಸಲಾಗುತ್ತಿದೆ ಎಂಬ ಆರೋಪವೂ ಇದೆ. ಆದುದ್ದರಿಂದ ಇಲ್ಲಿ ಜಮೀನು ಸ್ವಾಧೀನಕ್ಕೆ ರೈತರು ಅಡ್ಡಗಾಲು ಹಾಕಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಬೇಕಾದ ಆಯಾ ರಾಜಕೀಯ ಪಕ್ಷಗಳು ಮತ್ತು ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ. ಈ ಕಾರಣದಿಂದಾಗಿ ಈ ಯೋಜನೆಗಳಿಗೆ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬರುತ್ತಿಲ್ಲ.

ಹೈದ್ರಾಬಾದ್-ಕರ್ನಾಟಕ ಹೆಸರನ್ನು ಬದಲಾಯಿಸಿ ಕಲ್ಯಾಣ-ಕರ್ನಾಟಕವೆಂದು ನಾಮಕರಣ ಮಾಡಿದ ಬಿಜೆಪಿ ಸರ್ಕಾರದ ನಡೆಯು ಈ ಭಾಗದ ಜನರಲ್ಲಿ ತೃಪ್ತಿ ತಂದಿಲ್ಲ. ಈ ಭಾಗದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನವನ್ನೇ ಕಡಿತಗೊಳಿಸುವ ಸರ್ಕಾರದ ನಡೆಯು ಎಷ್ಟರ ಮಟ್ಟಿಗೆ ರೈಲ್ವೆ ಯೋಜನೆಗಳಲ್ಲಿ ಹಿತಾಸಕ್ತಿ ಪ್ರದರ್ಶಿಸುತ್ತದೆ ಎಂಬುವುದೂ ಕೂಡ ಈ ಭಾಗದ ಪ್ರಜ್ಞಾವಂತರಲ್ಲಿ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸರಿಸುಮಾರು ೭೦ ವರ್ಷಗಳ ಆಡಳಿತ ನಿಜಾಮರ ಆಡಳಿತವನ್ನೇ ಓಲೈಸುತ್ತಿರುವುದು ದುರಂತವೇ ಸರಿ. ಈಗಲಾದರೂ ಸರ್ಕಾರಗಳು ಈ ಭಾಗದ ಈ ಎರಡೂ ರೈಲ್ವೆ ಯೋಜನೆಗಳಿಗೆ ವೇಗ ನೀಡಿ ಪೂರೈಸುವ ಜವಾಬ್ದಾರಿ ತೋರಬೇಕಾಗಿದೆ.

5 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page