ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಸಮೀಕ್ಷೆ: ಗ್ರಾಮೀಣ ಕ್ಷೇತ್ರ: ಬಿಜೆಪಿಗೆ ಯಾರಿದ್ದಾರೆ?


ಜನತೆ ಅಸಮಾಧಾನದಿಂದ ತಿಪ್ಪರಾಜುಗೆ ಭಾರೀ ಹಿನ್ನೆಡೆಯಾಗುವ ಸಾಧ್ಯತೆ
ರಾಯಚೂರು.ಏ.೩-ಜಿಲ್ಲೆಯ ಅತಿದೊಡ್ಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ೨೦೨೩ರ ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿ ಹಲವು ಮನ್ವಂತರಕ್ಕೆ ಕಾರಣವಾಗುತ್ತಿದ್ದು, ಬಿಜೆಪಿಯ ಆಂತರಿಕ ಸಮೀಕ್ಷೆ ಹಲವು ಕುತೂಹಲಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.
೨೦೧೮ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿಯ ತಿಪ್ಪರಾಜ ಹವಾಲ್ದಾರ್, ೨೦೨೩ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆಯಲ್ಲಿದ್ದಾರೆ. ಆದರೆ, ಹೊಸ ಮುಖದ ಮುನ್ನಲೆಯಿಂದಾಗಿ ತುಸು ಆತಂಕ ಎದುರಿಸುತ್ತಿದ್ದಾರೆಂಬ ಸಮೀಕ್ಷೆಗಳು ಹೊರಬಂದಿವೆ.
ರಾಯಚೂರು ಗ್ರಾಮೀಣ ಕ್ಷೇತ್ರದ ಸ್ಥಳೀಯ ನಾಯಕರಾಗಿರುವ ಶಿವಪ್ಪ ನಾಯಕರ ಕಾರ್ಯವೈಖರಿ, ತಿಪ್ಪರಾಜು ಸಿದ್ಧತೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಈಗಾಗಲೇ, ಗ್ರಾಮೀಣ ಕ್ಷೇತ್ರದಾದ್ಯಂತ ಶಿವಪ್ಪ ನಾಯಕರ ಓಡಾಟ, ಸಂಚಲನ ಮೂಡಿಸಿದೆ. ೨೦೨೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ತಯಾರಿಯಲ್ಲಿದ್ದಾರೆಂಬ ಸುಳಿವು ಬಿಟ್ಟುಕೊಡದಿದ್ದರೂ ಶಿವಪ್ಪ ನಾಯಕರ ಕಾರ್ಯವೈಖರಿ ಗ್ರಾಮೀಣ ಕ್ಷೇತ್ರದ ಜನತೆಗೆ ಪರೋಕ್ಷವಾಗಿಯೇ ತಾಕಿದಂತಿದೆ.
ಈ ಹಿನ್ನೆಲೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರರಿಗೆ ಹಿನ್ನೆಡೆಯಾಗಬಹುದೆಂಬ ಅಂದಾಜಿದ್ದರೂ ಈ ಪ್ರಸ್ತುತರ ಸಿದ್ಧತೆ ಮಾಜಿ ಶಾಸಕ ತಿಪ್ಪರಾಜ್‌ಗೆ ಕೈಹಿಡಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ಮುಖ್ಯವಾದ ಪ್ರಶ್ನೆಯೊಂದು ಎದುರಾಗಿದ್ದು, ಹಾಲಿ ಶಾಸಕ ಕಾಂಗ್ರೆಸ್‌ನ ಬಸನಗೌಡ ದದ್ದಲ್‌ರಿಗೆ ಪೈಪೋಟಿ ನೀಡಬಹುದಾದ ನಾಯಕರ ಪಟ್ಟಿಯಲ್ಲಿ ತಿಪ್ಪರಾಜ್ ಇಲ್ಲದಂತಾಗಿದ್ದಾರೆ. ರಾಜಕೀಯ ಕಾರ್ಯವೈಖರಿಯನ್ನು ಜನತೆ ಅಸಮಾಧಾನದಿಂದ ನೋಡುವಂತಾಗಿದ್ದು, ಇದು ತಿಪ್ಪರಾಜುಗೆ ಭಾರೀ ಹಿನ್ನೆಡೆಯಾಗುವ ಸಾಧ್ಯತೆಯಿದೆ.
ಹಲವು ಕಾರ್ಯಕ್ರಮಗಳು ನಾಟಕೀಯ ರೂಪ ಪಡೆದಿವೆ. ಈ ಕಾರಣಗಳನ್ನು ಗಮನಿಸಿದರೆ ಉದಯೋನ್ಮುಖ ನಾಯಕರಾಗಿರುವ ಶಿವಪ್ಪ ನಾಯಕರಿಗೆ ಧನಾತ್ಮಕ ವಿಷಯವಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ. ದೇವದುರ್ಗದ ಹಾಲಿ ಶಾಸಕ ಕೆ.ಶಿವನಗೌಡ ನಾಯಕರ ಆಪ್ತರೆನಿಸಿಕೊಂಡಿರುವ ಶಿವಪ್ಪ ನಾಯಕ ಅವರಿಗೆ ಇದು ಪಕ್ಷದಲ್ಲಿ ಉನ್ನತ ಸ್ಥಾನ ಗಿಟ್ಟಿಸುವಲ್ಲಿ ಸಹಾಯವಾಗಲಿದೆ. ಕೊಪ್ಪಳ ರಾಯಚೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತು ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಶಿವನಗೌಡರ ಬಲಗೈ ಬಂಟನAತೆ ಇದ್ದುಕೊಂಡು ನಿಭಾಯಿಸುತ್ತಿರುವ ಪರಿ ಗ್ರಾಮೀಣ ಜನರ ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ.
ಇನ್ನೊಂದು ಕಡೆ ಗ್ರಾಮೀಣ ಕ್ಷೇತ್ರದಾದ್ಯಂತ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರರ ವ್ಯವಹಾರಾತ್ಮಕ ವಾತ್ಸಲ್ಯ ಜನರಲ್ಲಿ ಗೊಂದಲವನ್ನು ತಂದಿದೆ. ಈ ಎಲ್ಲಾ ಕಾರಣಗಳು ಒಂದು ಕಡೆಯಾದರೆ, ತಿಪ್ಪರಾಜು ಹವಾಲ್ದಾರರ ಕ್ಷಿಪ್ರಗತಿಯ ಪಕ್ಷ ಚಟುವಟಿಕೆ ಅನುಕೂಲತೆಯನ್ನು ತಂದುಕೊಡಬಹುದೆAಬ ಮಾಹಿತಿಯೂ ಸಮೀಕ್ಷೆಯಿಂದ ತಿಳಿದುಬಂದಿದೆ.
ವೈಯಕ್ತಿಕ ವರ್ಚಸ್ಸಿನ ಮೇಲೆ ಸಮೀಕ್ಷೆ ಕೈಗೊಂಡಿದ್ದು, ನಂತರ ಪಕ್ಷದ ವರ್ಚಸ್ಸು ಯಾವ ರೀತಿಯ ಅನುಕೂಲತೆಯನ್ನು ಕಲ್ಪಿಸಿಕೊಡಲಿದೆ ಎಂಬುವುದರ ಮೇಲೆ ೨೦೨೩ರ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಮಾನದಂಡವಾಗಿ ಪರಿಗಣನೆಯಾಗಲಿದೆ.