ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಯಾಸೀನ್, ವಸಂತ ಬೆಂಬಲಿತ ಕೈ ಸದಸ್ಯರು ಗೈರು! ಇದರ ಹಿಂದಿದ್ದವರು ಯಾರು?
ರಾಯಚೂರು ನಗರಸಭೆ ಅಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ನಡೆದ ಬೆಳವಣಿಗೆಯ ಒಂದು ಅವಲೋಕನ.

ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಉಪಾಧ್ಯಕ್ಷ (ಎಡಬದಿ) ನರಸಮ್ಮ ಅವರಿಂದ ಸನ್ಮಾನಿತಗೊಂಡ ಶ್ರೀಮತಿ ಲಲಿತಾ ಕಡಗೋಳು ( ಬಲಬದಿ). ರಾಯಚೂರು.ಮಾ.೩೧- ರಾಯಚೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಆನಾಯಸವಾಗಿ ಜಯ ಗಳಿಸುವುದಕ್ಕೆ ಮೂರು ಜನ ನಗರಸಭೆ ಸದಸ್ಯರು ಗೈರು ಆಗಿರುವುದೇ ಪ್ರಮುಖ ಕಾರಣವಾಗಿದೆ ಎನ್ನುವುದು ‘ಅಂಗೈ’ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಆ ರೀತಿ ಗೈರು ಆಗುವುದಕ್ಕೆ ಕಾರಣರು ಯಾರು? ಎನ್ನುವ ಬಿಸಿ ಬಿಸಿ ಚರ್ಚೆ ಈಗ ಎಲ್ಲೆಡೆ ನಡೆಯುತ್ತಿದೆ.
ನಗರದ ಮಾಜಿ ಶಾಸಕ ಸೈಯದ್ ಯಾಸೀನ್ ಮತ್ತು ಕೆಪಿಸಿಸಿ ಪ್ರ.ಕಾರ್ಯದರ್ಶಿಯಾಗಿದ್ದ ವಸಂತಕುಮಾರ್ ಹಾಗೂ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಬಿಜೆಪಿಯ ಬಿ-ಟೀಂನಂತೆ ವರ್ತಿಸಿದ್ದಾರೆಂಬ ಚರ್ಚೆಗಳು ನಗರದ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.
ಬುಧವಾರ ನಡೆದ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ವಾರ್ಡ್ ನಂ.೨೬ರ ಶೈನಜಾ ಬೇಗಂ ನಾಪತ್ತೆ, ವಾರ್ಡ್ ನಂ.೧೨ರ ಈ.ವಿನಯಕುಮಾರ, ವಾರ್ಡ್ ನಂ.೮ರ ಜೆಡಿಎಸ್ ಸದಸ್ಯೆ ಬೇಗಂ ಗೈರಿನ ಹಿಂದೆ ಈ ಮೂರು ಜನರ ಕೈವಾಡವಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಶಾಸಕ ಸೈಯದ್ ಯಾಸೀನ್‌ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಉಮರ್ ಫಾರೂಕ್ ರವಾನಿಸಿರುವ ಸಂದೇಶಗಳೇ ಇದಕ್ಕೆ ಪುಷ್ಠಿ ನೀಡಿದೆ. ಜೊತೆಗೆ ನಗರಸಭೆ ಅಧ್ಯಕ್ಷರ ಮೊದಲನೆ ಅವಧಿಯ ವೇಳೆ ಈ.ವಿನಯಕುಮಾರ್‌ಗೆ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸಿದ ಪರಿ ನೋಡಿದರೆ ಎರಡನೇ ಅವಧಿಯ ಅಧ್ಯಕ್ಷರಾಗಬೇಕಾಗಿದ್ದ ಸಾಜೀದ್ ಸಮೀರ್‌ಗೆ ಸೈಯದ್ ಯಾಸೀನ್ ಏಕೆ ಬೆಂಬಲಿಸಲಿಲ್ಲ ಎಂಬ ನಡೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಒಂದುವೇಳೆ ಸಾಜೀದ್ ಸಮೀರ್ ಪಕ್ಷೇತರ ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್‌ನ ಶೈನಜಾ ಬೇಗಂಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಆಗ್ರಹ ಯಾಸೀನ್‌ರಿಂದ ಕೇಳಿಬಂದಿದ್ದರೆ ಈ ಅನುಮಾನ ವ್ಯಕ್ತವಾಗುತ್ತಿರಲಿಲ್ಲ.
ಈ.ವಿನಯಕುಮಾರ್ ಗೈರು ಹಾಜರಾತಿಗೆ ಪರೋಕ್ಷವಾಗಿ ಎ.ವಸಂತಕುಮಾರ, ಸೈಯದ್ ಯಾಸೀನ್ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿರುವ ಈ.ವಿನಯಕುಮಾರ್ ಮತ್ತು ಶೈನಜಾ ಬೇಗಂ ಗೈರಿಗೆ ನಗರ ಶಾಸಕ ಡಾ.ಶಿವರಾಜ ಪಾಟೀಲರ ಕುತಂತ್ರ ಒಂದುಕಡೆಯಾದರೆ, ಇದಕ್ಕೆ ಪರೋಕ್ಷವಾಗಿ ಬೆಂಬಲಿಸಿರುವ ಸೈಯದ್ ಯಾಸೀನ್ ಮತ್ತು ವಸಂತಕುಮಾರ ಮತ್ತೊಂದು ಕಡೆ ಎಂಬ ಮಾತುಗಳಿವೆ.
ಈ ಕಾರಣದಿಂದ ನಗರಸಭೆ ಅಧ್ಯಕ್ಷ ಆಯ್ಕೆಯ ಮತಪ್ರಕ್ರಿಯೆಯಲ್ಲಿ ಈ ಇಬ್ಬರೂ ಸದಸ್ಯರು ಗೈರಾದರು ಎಂಬ ಚರ್ಚೆಗಳು ನಡೆದಿವೆ. ವಾರ್ಡ್ ನಂ.೮ರ ಜೆಡಿಎಸ್‌ನ ಸದಸ್ಯೆ ಬೇಗಂ ಗೈರಿನಲ್ಲಿ ರಜಾಕ್ ಉಸ್ತಾದ್ ಅವರ ಕೈವಾಡವೂ ಇದೆ ಎನ್ನಲಾಗಿದೆ. ಕಳೆದ ಬಾರಿ ಕಾಂಗ್ರೆಸ್‌ಗೆ ಬೆಂಬಲಿಸಿದ್ದ ಜೆಡಿಎಸ್‌ನ ಸದಸ್ಯರು ಈ ಬಾರಿ ಏಕೆ ಬೆಂಬಲಿಸಲಿಲ್ಲ ಎಂಬುವುದಕ್ಕೆ ಎರಡು ಕಾರಣಗಳಿವೆ. ಒಂದು ಕಾಂಗ್ರೆಸ್‌ನ ನಾಯಕರೆಂದು ಹೇಳಿಕೊಳ್ಳುವ ಮಾಜಿ ಶಾಸಕ ಸೈಯದ್ ಯಾಸೀನ್, ವಸಂತಕುಮಾರ್, ರಜಾಕ್ ಉಸ್ತಾದ್ ಜೊತೆ ಸೇರಿ ಮೂರು ಜನರ ಗೈರಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಮತ್ತೊಂದು ಶಾಸಕ ಡಾ.ಶಿವರಾಜ ಪಾಟೀಲರ ಆಮೀಷಕ್ಕೆ ಬಲಿಯಾಗಿದ್ದು.
ಮತದಾನದ ಸಂಖ್ಯೆಗಳಿಗನುಗುಣವಾಗಿ ವಿಶ್ಲೇಷಣೆ ಮಾಡುವುದಾದರೆ ಈ ಮೂರು ಜನ ಸದಸ್ಯರು ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದ್ದರೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರಾಗಬೇಕಾಗಿತ್ತು. ಇಲ್ಲವೇ, ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಚುನಾಯಿತರಾಗಿದ್ದ ಶೈನಜಾ ಬೇಗಂ ಅಧ್ಯಕ್ಷರಾಗುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗುತ್ತವೆ. ಆದರೆ, ಇಲ್ಲಿ ಕಾಂಗ್ರೆಸ್‌ನ ಈ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯ ತಂತ್ರಗಾರಿಕೆ ಮನದಲ್ಲಿಟ್ಟುಕೊಂಡು ಸಾಜೀದ್ ಸಮೀರ್ ಅವರು ಅಧ್ಯಕ್ಷರಾಗದಂತೆ ನೋಡಿಕೊಂಡರು ಎನ್ನಲಾಗಿದೆ.
ಸಾಜೀದ್ ಸಮೀರ್ ಅಧ್ಯಕ್ಷರಾದರೆ ಈ ಕ್ರೆಡಿಟ್ ಕಾಂಗ್ರೆಸ್‌ನ ಯುವ ಮುಖಂಡ ರವಿ ಭೋಸರಾಜ್‌ಗೆ ಸಿಗಲಿದೆ ಎಂಬ ಅವಲೋಕನ ಇತ್ತು ಎನ್ನಲಾಗಿದೆ. ಹೇಗಾದರೂ ಮಾಡಿ ಅಧ್ಯಕ್ಷರ ಸ್ಥಾನ ಬಿಜೆಪಿಗೆ ಸಿಗಲಿ ಎಂಬ ಮನೋಧರ್ಮವೇ ಈ ಮೂರು ಜನ ಗೈರು ಹಾಜರಾತಿ ಮತ್ತು ಹೇಮಲತಾ ಬೂದೆಪ್ಪ ಅವರ ಅಡ್ಡ ಮತದಾನ ಕಾರಣ ಎಂಬ ವಿಶ್ಲೇಷಣೆಯೂ ಇದೆ.
ಈ ಅಸಮಾಧಾನವನ್ನು ಸಮರ್ಪಕವಾಗಿ ಬಳಸಿಕೊಂಡಿರುವುದಲ್ಲದೇ ಹಣಬಲ ಮತ್ತು ಅಧಿಕಾರ ಬಲದಿಂದ ಹಾಲಿ ಶಾಸಕ ಡಾ.ಶಿವರಾಜ ಪಾಟೀಲ್ ಯಶಸ್ಸು ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧ್ಯಕ್ಷ ಚುನಾವಣೆ ಸಮೀಪದ ಅವಧಿಯಲ್ಲಿ ಬಂದ ನ್ಯಾಯಾಲಯದ ತೀರ್ಪು ಶಾಸಕ ಡಾ.ಶಿವರಾಜ ಪಾಟೀಲರನ್ನು ಕಂಗೆಡಿಸುವಂತೆ ಮಾಡಿತ್ತು ಎಂಬುವುದು ಸುಳ್ಳಲ್ಲ. ಇಲ್ಲಿ ಹಣಬಲ ಕೆಲಸ ನಿರ್ವಹಿಸಿದ್ದರಿಂದ ಕಾಂಗ್ರೆಸ್‌ನ ಸದಸ್ಯರು ಗೈರು ಹಾಜರಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಗುಸು ಗುಸು ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ನಗರಸಭೆ ಚುನಾವಣೆ ಕಾಂಗ್ರೆಸ್‌ನಲ್ಲಿ ಅವಲೋಕನಕ್ಕೆ ದಾರಿ ಮಾಡಿಕೊಟ್ಟಿದ್ದರೆ, ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲರ ಹಣಬಲ, ಅಧಿಕಾರದ ದುರುಪಯೋಗವನ್ನು ವಿಶ್ಲೇಷಣೆ ಮಾಡುವಂತಾಗಿರುವುದು ಸುಳ್ಳಲ್ಲ.