top of page
  • Writer's pictureಹೈದ್ರಾಬಾದ್ ಕರ್ನಾಟಕ ಡೆಸ್ಕ್

ಬೆಳಗಾವಿ ವಲಯ: 10172 ಕೋಟಿ ರೂ. ಜಿ ಎಸ್ ಟಿ ಸಂಗ್ರಹ

ರೂ.10172 ಕೋಟಿಗಳ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ. 12 ಜಿಲ್ಲೆಗಳ ಒಟ್ಟು 2,30,566 ತೆರಿಗೆದಾರರು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ.

ಕೊಪ್ಪಳ, ಏ. 01: 2021-22ರ ಆರ್ಥಿಕ ವರ್ಷದಲ್ಲಿ ಸಮಗ್ರ ಉತ್ತರ ಕರ್ನಾಟಕ 12 ಜಿಲ್ಲೆಗಳನ್ನೊಳಗೊಂಡಿರುವ ಬೆಳಗಾವಿ ವಿಭಾಗದಲ್ಲಿ ರೂ.10172 ಕೋಟಿಗಳ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ದಾಖಲೆಯ ಸಂಗ್ರಹವಾಗಿದೆ ಎಂದು ಬೆಳಗಾವಿಯ ಕೇಂದ್ರ ಜಿಎಸ್‌ಟಿ ಹಾಗೂ ಅಬಕಾರಿ ಸುಂಕ ವಿಭಾಗದ ಉಪ ಆಯುಕ್ತ ಅಜಿಂಕ್ಯಾ ಹರಿ ಕಾಟ್ಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಎಸ್‌ಟಿ ಸಂಗ್ರಹವು ದೃಢವಾದ ಆರ್ಥಿಕ ಬೆಳವಣಿಗೆಯ ಸಂಕೇತವಾಗಿದೆ ಮತ್ತು ದೇಶವು ಸಾಂಕ್ರಾಮಿಕದ ನೆರಳಿನಿಂದ ದೂರ ಸರಿದಿದೆ ಎಂಬುದರ ಸೂಚಕವಾಗಿದೆ. ಬೆಳಗಾವಿ ಆಯುಕ್ತಾಲಯವು ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ.

ಈ ಜಿಲ್ಲೆಗಳಲ್ಲಿ ಒಟ್ಟು 2,30,566 ತೆರಿಗೆದಾರರು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಇವುಗಳನ್ನು ರಾಜ್ಯ ಅಥವಾ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಕೇಂದ್ರ ಜಿಎಸ್‌ಟಿ ಆಡಳಿತದ ಅಡಿಯಲ್ಲಿ ನೋಂದಾಯಿಸಲಾದ ತೆರಿಗೆದಾರರಿಂದ ಬೆಳಗಾವಿ ಕೇಂದ್ರ ಜಿಎಸ್‌ಟಿ ವಿಭಾಗವು ರೂ.10,172 ಕೋಟಿಗಳನ್ನು ಸಂಗ್ರಹಿಸಿದೆ. 2019-20ನೇ ಸಾಲಿನಲ್ಲಿ ಈ ಆಯುಕ್ತಾಲಯದ ಆದಾಯವು ರೂ.7,677 ಕೋಟಿಗಳಷ್ಟು, 2020-21ನೇ ಸಾಲಿಗೆ ರೂ.7,124 ಕೋಟಿಗಳಷ್ಟಿತ್ತು. ಈ ಬಾರಿ ಅದು ರೂ.10,172 ಕೋಟಿಗೆ ಏರಿಕೆಯಾಗಿದ್ದು, ಹಿಂದಿನ ವರ್ಷಗಳ ಸಂಗ್ರಹಕ್ಕಿಂತ ಶೇ.43 ರಷ್ಟು ಹೆಚ್ಚಳವಾಗಿದೆ. ಉಕ್ಕು, ಸಿಮೆಂಟ್ ಗಣಿಗಾರಿಕೆ, ಸಕ್ಕರೆ ಪ್ರಮುಖ ಕೈಗಾರಿಕೆಗಳಾದ ಜೆಎಸ್‌ಡಬ್ಲ್ಯೂ, ಕೆರಾಮ್ ಇಂಡಸ್ಟೀಸ್, ಓರಿಯಂಟ್ ಸಿಮೆಂಟ್, ಎನ್‌ಎಂಡಿಸಿ ಮತ್ತಿತರ ಬೃಹತ್ ಕೈಗಾರಿಕೆಗಳು, ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಪಾರ ಸಂಖ್ಯೆಯ ವರ್ತಕರು ಕೂಡ ದಾಖಲೆಯ ಜಿಎಸ್‌ಟಿ ಸಂಗ್ರಹಕ್ಕೆ ಕೊಡುಗೆ ನೀಡಿದ್ದಾರೆ.

ರಾಷ್ಟ್ರದ ‘ಆಜಾದಿ ಕಾ ಅಮೃತ್ ಮಹೋತ್ಸ'ವದ ಅಂಗವಾಗಿ ವ್ಯಾಪಾರ ಮತ್ತು ಉದ್ಯಮಕ್ಕೆ ಸಹಾಯ ಮಾಡಲು ತೆರಿಗೆದಾರರ ಸೌಲಭ್ಯ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಗಿದೆ. ಆಯುಕ್ತಾಲಯವು ತೆರಿಗೆ ವಂಚಕರ ವಿರುದ್ಧ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. 2021 ಸೆಪ್ಟೆಂಬರ್‌ನಲ್ಲಿ ಇ-ವೇ ಬಿಲ್ ಇಲ್ಲದೆ ಸಾಗಿಸುತ್ತಿದ್ದ ಏಳು ಕೋಟಿ ರೂಪಾಯಿ ಮೌಲ್ಯದ ಅಡಿಕೆಯ ಬೃಹತ್ ಸರಕುಗಳನ್ನು ಜಪ್ತಿ ಮಾಡಲಾಯಿತು. ಶೀಘ್ರ ನಾಶವಾಗುವಂತಹ ಈ ಅಡಿಕೆಯ ಸರಕನ್ನು ಯಶಸ್ವಿಯಾಗಿ ಹರಾಜು ಮಾಡಿ, ಜಿಎಸ್‌ಟಿ ಮೊತ್ತವನ್ನು ವಸೂಲಿ ಮಾಡಲಾಗಿದೆ. ಬೇಹುಗಾರಿಕೆ ಅಧಿಕಾರಿಗಳು ಮೂರು ಕೋಟಿ ರೂ.ಗಳ ನಗದು ಮತ್ತು ರೂ.503 ಕೋಟಿ ಹೂಡುವಳಿ ತೆರಿಗೆ ಜಮೆ (ಐಟಿಸಿ) ಯಲ್ಲಿ 101 ಅಪರಾಧ ಪ್ರಕರಣಗಳನ್ನು ದಾಖಲೆ ಮಾಡಿಕೊಂಡಿದ್ದಾರೆ. ತೆರಿಗೆ ವಂಚಕರ ವಿರುದ್ಧ ಕ್ರಮಕೈಗೊಳ್ಳಲು ಜಿಎಸ್‌ಟಿ ಕಾನೂನಿನಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ.

7 views0 comments

Recent Posts

See All

ಬೆಂಗಳೂರು: ರಾಜ್ಯ ಸರ್ಕಾರ ನಿಗಮ ಮಂಡಳಿ ಮತ್ತು ಪ್ರಾಧಿಕಾರ ನಾಮನಿರ್ದೇಶಿತ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ಸು ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ/ಮಂಡಳಿ/ಪ್ರಾಧಿಕಾರದ ಒಟ್ಟು 52 ಮಂದಿಯನ್ನು ಹಿಂಪಡೆದಿರುವುದಾಗಿ ಮುಖ್

bottom of page