ಹೈದ್ರಾಬಾದ್ ಕರ್ನಾಟಕ ಡೆಸ್ಕ್
ಬೆಲೆ ಏರಿಕೆ ಮುಚ್ಚಿ ಹಾಕಲು ಕೋಮುವಾದ ಮುನ್ನೆಲೆಗೆ: ಸಿದ್ದರಾಮಯ್ಯ ವಾಗ್ದಾಳಿ
Updated: Apr 4, 2022
ತೆರಿಗೆ ಹೆಚ್ಚಿಸಿ ಜನ ಸಾಮಾನ್ಯರ ಮೇಲೆ ಗದಾ ಪ್ರಹಾರ’

ಬೆಂಗಳೂರು.ಏ.3- ಬೆಲೆ ಏರಿಕೆ, ನಿರುದ್ಯೋಗದಂತಹ ವಿಷಯಗಳನ್ನು ಮುಚ್ಚಿಹಾಕಲು ಕೋಮುವಾದದ ವಿಷ ಬೀಜವನ್ನು ಬಿಜೆಪಿ ಬಿತ್ತುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
‘ನೂರಾರು ವರ್ಷಗಳಿಂದ ಹಲಾಲ್ ಕಟ್ ನಡೆದುಕೊಂಡು ಬಂದಿದೆ. ರಕ್ತದಿಂದ ಕೂಡಿರುವ ಮಾಂಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಮುಸ್ಲಿಮರ ನಂಬಿಕೆ. ಅವರ ನಂಬಿಕೆಯಂತೆ ಅವರಿಗೆ ಬದುಕಲು ಬಿಡಿ. ನಾವೂ ಕೂಡ ಹಲಾಲ್ ಕಟ್ ಮಾಂಸ ಖರೀದಿಸಿ ತಿಂದಿಲ್ವಾ? ನಾವು ಜಾತ್ರೆಗಳಲ್ಲಿ ಮರಿ ಕಡಿಯುವುದಿಲ್ಲವಾ? ಅನಗತ್ಯ ವಿಚಾರಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಬೇಡಿ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಜನರಿಗೆ ಮೋಸ, ದ್ರೋಹ ಮಾಡುತ್ತಿರುವ ಬಿಜೆಪಿ, ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುತ್ತಿದೆ. ಇವರಿಗೆ ಮನುಷ್ಯತ್ವ ಇದೆಯಾ? ಕಾನೂನು ಸುವ್ಯವಸ್ಥೆಗೂ ಅಭಿವೃದ್ಧಿಗೂ ಸಂಬಂಧ ಇದೆ. ಶಾಂತಿ ಇಲ್ಲದಿದ್ದರೆ ಹೂಡಿಕೆ ಮೇಲೆ ಪರಿಣಾಮ ಬೀರುತ್ತದೆ. ಉದ್ಯಮಗಳು ಸ್ಥಾಪನೆಯಾಗದಿದ್ದರೆ ನಿರುದ್ಯೋಗ ತಾಂಡವವಾಡುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಅಬಕಾರಿ ಸುಂಕದಿಂದ ₹26 ಲಕ್ಷ ಕೋಟಿ ಹೆಚ್ಚುವರಿ ಆದಾಯ ದೊರೆತಿದೆ. ಆದರೂ, ತೆರಿಗೆಗಳನ್ನು ಕಡಿಮೆ ಮಾಡಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡದೇ ರೈತರ ರಕ್ತ ಕುಡಿಯುತ್ತಿದೆ’ ಎಂದು ಕಟುವಾಗಿ ಟೀಕಿಸಿದರು.
‘50 ಕೆ.ಜಿ. ಚೀಲದ ಡಿಎಪಿ ರಸಗೊಬ್ಬರ ಬೆಲೆಯನ್ನು ₹150 ಹೆಚ್ಚಿಸಲಾಗಿದೆ. ಇದರಿಂದ, ಬೆಲೆ ₹1,350ಕ್ಕೆ ತಲುಪಿದೆ. ದೇಶದಲ್ಲಿ ಪ್ರತಿ ವರ್ಷ 1.20 ಕೋಟಿ ಟನ್ ಡಿಎಪಿ ಬಳಸಲಾಗುತ್ತಿದ್ದು, ಬೆಲೆ ಹೆಚ್ಚಿಸುವ ಮೂಲಕ ₹3,600 ಕೋಟಿ ಮೊತ್ತವನ್ನು ರೈತರಿಂದ ಸುಲಿಗೆ ಮಾಡಲಾಗಿದೆ. ಕೀಟನಾಶಕಗಳ ಮೇಲೆ ಶೇ18 ರಷ್ಟು ಮತ್ತು ಯಂತ್ರೋಪಕರಣಗಳ ಮೇಲೆ ಶೇ 12 ರಷ್ಟು ರಸಗೊಬ್ಬರಗಳ ಮೇಲೆ ಶೇ 5 ರಷ್ಟು ಜಿಎಸ್‌ಟಿ ಹಾಕಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಡೀಸೆಲ್ ಬೆಲೆ ಶೇ 531 ರಷ್ಟು ಮತ್ತು ಪೆಟ್ರೋಲ್ ಬೆಲೆ ಶೇ 203 ರಷ್ಟು ಹೆಚ್ಚಿಸಲಾಗಿದೆ. ಆದರೆ, ಕಾರ್ಪೋರೇಟ್ ತೆರಿಗೆ ಶೇ 35 ರಿಂದ ಶೇ 23ರಷ್ಟು ಕಡಿಮೆ ಮಾಡಲಾಗಿದೆ. ಇದೇ ಮೋದಿ ಸರ್ಕಾರದ ಸಾಧನೆ’ ವ್ಯಂಗ್ಯವಾಡಿದರು.
‘ತೈಲ ಕಂಪನಿಗಳು ಸ್ವಾಯತ್ತತೆ ಹೊಂದಿರುವುದರಿಂದ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಮತ್ತು ಅಂತರರಾಷ್ಟ್ರೀಯ ಕಚ್ಚಾ ತೈಲದ ಮೇಲೆ ಬೆಲೆ ಏರಿಕೆ ಅವಲಂಬನೆಯಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಹಾಗಿದ್ದರೆ, ಚುನಾವಣೆ ಸಮಯದಲ್ಲಿ ತೈಲ ಬೆಲೆ ಏಕೆ ಹೆಚ್ಚಿಸಲಿಲ್ಲ. ಆಗ ಮೌನವಹಿಸಿದ್ದು ಏಕೆ. ನವೆಂಬರ್‌ನಿಂದ ಮಾರ್ಚ್‌ವರೆಗೆ ಬೆಲೆ ಹೆಚ್ಚಿಸಲಿಲ್ಲ. ಆದರೆ, ಕಳೆದ 10–12 ದಿನಗಳಲ್ಲಿ ₹ 7.20 ರಷ್ಟು ಹೆಚ್ಚಾಗಿದೆ. ಅಡುಗೆ ಅನಿಲ ಬೆಲೆ ₹50 ಹೆಚ್ಚಾಗಿದೆ’ ಎಂದು ವಿವರಿಸಿದರು.
‘ಈ ವರ್ಷ ರಾಜ್ಯದಲ್ಲಿ 15 ಲಕ್ಷ ಟನ್ ರಾಗಿ ಬೆಳೆದಿದ್ದರೂ ಬೆಂಬಲ ಬೆಲೆ ಅಡಿಯಲ್ಲಿ ಕೇವಲ 2.1 ಲಕ್ಷ ಟನ್ ಮಾತ್ರ ರಾಗಿ ಖರೀದಿಸುವುದಾಗಿ ಸರ್ಕಾರ ಹೇಳಿದೆ. ಇಲ್ಲಿಯವರೆಗೆ, 1.9 ಲಕ್ಷ ಟನ್ ಮಾತ್ರ ಖರೀದಿಸಲಾಗಿದೆ. ಇದೊಂದು ರೈತ ಪರ ಸರ್ಕಾರವೇ’ ಎಂದು ಪ್ರಶ್ನಿಸಿದರು.
ಜೆಡಿಎಸ್ ವಿರುದ್ಧ ಕಿಡಿಕಾರಿದ ಅವರು, ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಗೆ ಬೆಂಬಲ ನೀಡಿದ್ದು ಜೆಡಿಎಸ್. ಬೂಟಾಟಿಕೆಯನ್ನು ಜೆಡಿಎಸ್ ಬಿಡಲಿ. ನಾವು ಜಾತ್ಯತೀತಕ್ಕೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
‘ತೆರಿಗೆ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಗದಾಪ್ರಹಾರ’:
‘ಕೇಂದ್ರ ಸರ್ಕಾರ ತೆರಿಗೆಗಳನ್ನು ಹೆಚ್ಚಿಸಿ ಜನ ಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಪ್ರತಿ ದಿನವೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಪಿಕ್‌ಪಾಕೆಟ್ ಮಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
‘ಬೆಲೆ ಏರಿಕೆಯಿಂದ ಎಲ್ಲ ವರ್ಗಗಳ ಜನರು ತತ್ತರಿಸಿದ್ದಾರೆ. ತೆರಿಗೆ ಹೆಸರಲ್ಲಿ ಲೂಟಿ ನಡೆಸುತ್ತಿರುವ ಬಿಜೆಪಿ ಸರ್ಕಾರ. ಜನ ಜೀವನವನ್ನು ನರಕವಾಗಿಸಿದೆ. ಬಿಜೆಪಿ ಸರ್ಕಾರದಲ್ಲಿ ಅಚ್ಛೇ ದಿನಗಳೇ ಕಾಣಿಸಲಿಲ್ಲ. ರಸಗೊಬ್ಬರ, ಪೆಟ್ರೋಲ್, ಡೀಸೆಲ್, ಸಿಮೆಂಟ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಿಸಲಾಗಿದೆ. ಜನರ ಆದಾಯ ಪಾತಾಳಕ್ಕಿಳಿದಿದ್ದು, ಬೆಲೆಗಳು ಗಗಕ್ಕೇರಿವೆ’ ಅವರು ತಿಳಿಸಿದರು.
’ಕಬ್ಬಿಣದ ಬೆಲೆ ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ30 ರಷ್ಟು ಹೆಚ್ಚಾಗಿದೆ. ಸಿಮೆಂಟ್ ಬೆಲೆ ಶೇ 22 ರಷ್ಟು ಹೆಚ್ಚಾಗಿದೆ. ಕೃಷಿ ಯಂತ್ರೋಪಕರಣಗಳ ಬೆಲೆಯೂ ಹೆಚ್ಚಳವಾಗಿದೆ. ಬೆಲೆ ಇಳಿಕೆಯಾಗುವವರೆಗೂ ಜನರ ಪರವಾಗಿ ಕಾಂಗ್ರೆಸ್ ಹೋರಾಟ ನಡೆಸಲಿದೆ. ಈ ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ ನಡೆಯಲಿದೆ’ ಎಂದು ಹೇಳಿದರು.